ಮಾತು ಸೋಲುತ್ತಿರುವ ಕಾಲದಲ್ಲಿ ಸೊಲ್ಲು ಎಲ್ಲೆಲ್ಲಿಂದ ಬರುತ್ತದೋ ಊಹಿಸಲಾಗದು. ಈ ಸೊಲ್ಲು ಅಂತಹ ಸಾವಿರಾರು ಸೊಲ್ಲುಗಳಲ್ಲಿ ಒಂದು..
ಬರೆಯಲು ಶುರು ಮಾಡಿ ಇಪ್ಪತ್ತೊಂದು ವರ್ಷಗಳು ಆಗುತ್ತಾ ಬಂದಿದೆ. ನನ್ನ ಬರಹದ ಮೊದಲ ದಶಕವನ್ನು ಶಾಲೆಯಿಂದ ಕಾಲೇಜು ವರೆಗೆ ಪುಸ್ತಕ ಪೆನ್ನುಗಳಲಿ ಶುರು ಮಾಡಿ ಪದವಿ ಕಾಲೇಜಿಗೆ ಬಂದಾಗ ಈ ಮೇಲು, ಬ್ಲಾಗ್ ಪರಿಚಯ ಓದು ನಂತರ ಅಲ್ಲಿಯೇ ಬರಹವನ್ನು ಮುಂದುವರಿಸಬೇಕಾಯಿತು. ನಂತರ ಕ್ಷಿಪ್ರಗತಿಯಲ್ಲಿ ಉಂಟಾದ ವಿದ್ಯನ್ಮಾನ ಜಾಲಗಳ ಪರಿಚಯ, ಪ್ರಚಾರ ಪ್ರಸಾರಗಳು ಹಿಂದಿರುಗದಂತೆ ಮಾಡಿದವು. ಹತ್ತತ್ತಿರ ಹದಿನೈದು ವರ್ಷಗಳ ಹಿಂದೆ ಡಿಜಿಟಲ್ ಓದು ಬರಹಕ್ಕೆ ಬಂದ ನಾನು ಮತ್ತೆ ಪೆನ್ನು ಮುಟ್ಟಲೇ ಇಲ್ಲ.
ಬ್ಲಾಗ್ ಓದು ಬರಹಗಳ ಕಾಲವು ಬಂದಷ್ಟೇ ವೇಗವಾಗಿ ಕಳೆದುಹೋಯಿತು. ಸೋಶಿಯಲ್ ಮಿಡಿಯಾ ಬಹಳವಾಗಿ ವೇಗವಾಗಿ ಬೆಳೆಯುವುದರ ಜೊತೆಗೆ ಓದು ಬರಹಗಳನ್ನು ಕೂಡ ವರ್ಗಾಯಿಸಿಕೊಂಡಿತು. ಇಂಟರ್ ನೆಟ್ಟು ಸುಲಭವಾಗಿ ಮೊಬೈಲ್ ಗಳಲ್ಲಿ ಹೆಚ್ಚು ಹೆಚ್ಚುವಾಗಿ ಸಿಗುತ್ತಲೇ ನಮ್ಮ ವರ್ತನೆಗಳು ಅಮೂಲಾಗ್ರವಾಗಿ ಬದಲಾಗಿಬಿಟ್ಟವು. ಈ ಬದಲಾವಣೆಗಳು ಕೇವಲ ಓದು ಬರಹಕ್ಕೆ ಸೀಮಿತವಾದ ಬದಲಾವಣೆಗಳು ಅಲ್ಲ. ನಮ್ಮನ್ನು ಮಾನಸಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಎಲ್ಲ ದೃಷ್ಟಿಯಿಂದಲೂ ಪ್ರಭಾವಿಸಲು ಶುರುಮಾಡಿದವು. ಸುಲಭದ ಇಂಟರ್ ನೆಟ್ಟು ಬಳಸುತ್ತಾ ನಮಗೆ ತಿಳಿಯದಂತೆ ನಾವು ವ್ಯವಸ್ತೆಯ ಬಲಿಪಶುಗಳಾದೆವು. ಹನ್ನೊಂದು ವರ್ಷ ಫೇಸ್ಬುಕ್ ನಲ್ಲಿ ಕಳೆದ ಕಾಲವನ್ನು ನೆನೆಸಿಕೊಂಡರೆ ದಿಗಿಲಾಗುತ್ತದೆ.
ಇವಾಗ ಯಾಕೆ ಮತ್ತೆ ವಾಪಸು ಬ್ಲಾಗು, ವೆಬ್ ಸೈಟು ಬರಹ ?!
ಸೃಜನ, ಅನೇಕ, ಅನೇಕ ಗೆಳೆಯರು, ಸಂಕಥನ ಪತ್ರಿಕೆ ಆಮೇಲೆ ಪ್ರಕಾಶನ, ಸಂವಾದ ಕಾರ್ಯಕ್ರಮ ಅಂತೆಲ್ಲಾ ಕಳೆದ ಹದಿನೈದು ವರ್ಷಗಳಿಂದ ಗುಂಪುಗಳನ್ನು ಕಟ್ಟುತ್ತಾ ಸಂವಾದಗಳನ್ನು ಮಾಡುತ್ತಾ ಬಂದಿದ್ದು ಆಯ್ತು. ಆದರೆ ಯಾವ ಗುಂಪುಗಳು ಉಳಿಯಲಿಲ್ಲ, ಬೆಳೆಯಲಿಲ್ಲ. ಹಳೇ ನೀರು ಹೋದಂತೆಲ್ಲಾ ಹೊಸ ನೀರು ಬಂದಿದೆ ನಿಜ. ಆದರೆ ಈ ದುರಿತಕಾಲದಲ್ಲಿ ‘ವೈಯುಕ್ತಿಕ ಅಸ್ಮಿತೆ’ ಗಳೇ ಹೆಚ್ಚು ಪ್ರಾಬಲ್ಯ ಪಡೆದುಕೊಳ್ಳುತ್ತಿವೆ. ಸೋಶಿಯಲ್ ಮಿಡಿಯಾಗಳು ಅಂತಹ ಅತ್ಮರತಿಯನ್ನು ಕಳೆದೊಂದು ದಶಕದಲ್ಲಿ ನಮ್ಮಲ್ಲಿ ನೂರ್ಮಡಿಯಷ್ಟು ಹೆಚ್ಚು ಮಾಡಿವೆ. ಸ್ವಾನುರಾಗ, ಸ್ವಾನುಕಂಪ, ಸ್ವರತಿಗಳಲಿ ಬೇಸತ್ತು ಬಿಡುಗಡೆ ಪಡೆದುಕೊಳ್ಳಬೇಕು ಎಂದೆನಿಸ ತೊಡಗಿದೆ. ವರ್ಚುಯಲ್ ಗೆಳೆತನಗಳು, ಗುಂಪುಗಳು ಅವುಗಳಲ್ಲಿರುವ ಪ್ರಾಪಗಾಂಡಗಳು ಕೊನೆಗೊಂದು ದಿನ ಅವು ವೈಯುಕ್ತಿಕವಾಗಿ ನಮ್ಮ ಮೇಲೆ ಹೊರಿಸುವ ಪಾಪದ ಹೊರೆಗಳು ಎಲ್ಲವು ದಿನ ಕಳೆದಂತೆ ನಮಗೆ ಅರಿವಾಗಲು ಶುರುವಾಗಿದೆ. ಆದರೆ ಅದಾಗಲೇ ಬಹಳ ಕಾಲವನ್ನು ಅಲ್ಲಿ ಕಳೆದಿದ್ದು ಆಗಿದೆ. ಇವುಗಳ ನಡುವೆಯೇ ಸಂಕಥನ ಪತ್ರಿಕೆಯನ್ನು ಸಾಂಘಿಕವಾಗಿ ಮುನ್ನೆದೆಸಲು ಯತ್ನಿಸಿ ಸೋತೆ. ದಾರಿಯುದ್ದಕ್ಕೂ ಕೈಕೊಟ್ಟವರ ಪಟ್ಟಿಯೇ ಇವೆ. ಇದೆಲ್ಲದರ ನಡುವೆ ಬಹುಮುಖ್ಯವಾದ್ದು ವೈಯುಕ್ತಿಕವಾದ ಬದುಕು. ನನಗೆ ಅದೇ ದೊಡ್ಡದು.
೨೦೨೧ ರಿಂದ ಮುಂದಕ್ಕೆ ಏನು ಎಂಬುದನ್ನು ಯೋಜಿಸಿಕೊಳ್ಳಬೇಕಿತ್ತು. ಪತ್ರಿಕೆ ನಿಲ್ಲಿಸಿ ನಾಲ್ಕು ವರುಷ ಆಗಿದೆ. ಪ್ರಕಾಶನ ಹೇಗೆ ನಡಿತಾ ಇದೇ. ಬರಹಗಳು ಸಾಗುತ್ತಿವೆ. ಆದರೆ ಸಾಲುತ್ತಿಲ್ಲ. ನನ್ನ ಉತ್ಸಾಹ ಮತ್ತು ಶಕ್ತಿಯನ್ನು ಫೇಸ್ಬುಕ್ ನಲ್ಲೆ ವ್ಯಯಿಸಿಬಿಡಲು ನನಗೆ ಮನಸಿಲ್ಲ. ಇನ್ನು ಅಕಾಡೆಮಿಕ್ ವಲಯಕ್ಕೆ ಹೋಗಲು ನನಗೆಂದೂ ಮನಸಿಲ್ಲ. ಹಾಗಾಗಿ ಅನಾವಶ್ಯಕವಾಗಿ ನಾನು ಹೊತ್ತಿರುವ ಹೊರೆಗಳನ್ನು ಕೆಳಗಿಳಿಸಿ ಓದು ಬರಹಗಳಲ್ಲಿ ಪೂರ್ಣವಾಗಿ ತೊಡಗಿಕೊಳ್ಳಲು ಇಂದು ನಿರ್ಧರಿಸಿದ್ದೇನೆ.
ಕಲೆ ಸಾಹಿತ್ಯ ಸಂಗೀತ ಸಿನಿಮಾ ವಾಸ್ತುಶಿಲ್ಪ ಪಾಕಶಾಸ್ತ್ರ ಇತ್ಯಾದಿ ಹತ್ತಾರು ನನ್ನ ಅಭಿರುಚಿಗಳ ಕುರಿತಾಗಿ ಸರಣಿಯಲ್ಲಿ ಇಲ್ಲಿ ಬರೆಯುತ್ತಾ ಹೋಗಲಿದ್ದೇನೆ. ಕವಿತೆ, ಕಥೆ, ಪ್ರಬಂಧ, ವಿಮರ್ಶೆ ಬರೆಯುವುದು, ಪುಸ್ತಕ ಮಾಡುವುದು, ಅವನು ಮಾರುವುದು, ಲೈಬ್ರರಿಗಳಿಗೆ ಹೊರೆಹಾಕುವುದು, ಪ್ರಶಸ್ತಿಗಳಿಗೆ ಅರ್ಜಿ ಹಾಕುವುದರ ಬಗ್ಗೆ ವಿಪರೀತ ಪಾಪಪ್ರಜ್ಞೆ ಬಂದುಬಿಟ್ಟಿದೆ. ಎಲ್ಲ ಬಗೆಯಾ ತೊಡರುಗಳಿಂದ ಬಿಡಿಸಿಕೊಂಡು ಹಕ್ಕಿಯ ಹಾಗೆ ಇರಲು ಯತ್ನಿಸುತ್ತಿದ್ದೇನೆ. ಮತ್ತೆ ಬ್ಲಾಗಿಂಗ್ ಮಾಡುವುದು ಒಳ್ಳೆಯದು ಎಂದೆನಿಸಿ ಪುನರಾರಂಭಿಸಿದ್ದೇನೆ. ಇಂತಹ ಹೊತ್ತಿನಲ್ಲಿ ನನಗೆ ಪ್ರೇರಣೆ ಆಗಿದ್ದು ಬಲ್ಗೇರಿಯನ್ ಬರಹಗಾರ್ತಿ ಮರಿಯಾ ಪಪೂವಾ.
ಇಷ್ಟು ಹೇಳಿದ ಮಾತ್ರಕ್ಕೆ ನಾನು ರಾಜಕೀಯದ ಮಾತು ಬಿಟ್ಟೆನೆಂದು ಭಾವಿಸದಿರಿ. ಈ ೨೧ ವರ್ಷಗಳಲ್ಲಿ ನನ್ನ ಮಾತು ಬರಹ ಮತ್ತು ಮೌನ ಕೂಡ ರಾಜಕೀಯವಾಗೇ ಇದೆ. ಅದರಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಆದರೆ ಇನ್ನು ಈ ಕರುಳ ಬಳ್ಳಿಯ ಸೊಲ್ಲು ಬೇರೆಯದೇ ರೀತಿಯಲ್ಲಿ ಹೊರ ಬರಲಿದೆ. ಅದು ಕಲೆಯ ಎಲ್ಲ ಬಗೆಯ ಕಣ್ಣುಗಳಿಂದ ಬೆಳಕು ಹೆಕ್ಕಿ ತರಲಿದೆ ಎಂಬ ವಿಶ್ವಾಸ ನನ್ನದು. ಹೊಸ ದಾರಿ ಹೊರಳುವ ಮುನ್ನ ಒಂದು ಸೊಲ್ಲು ಹೇಳಬೇಕು ಅನಿಸಿತು. ನಮಸ್ಕಾರ.
ರಾಜೇಂದ್ರ ಪ್ರಸಾದ್
ರಥಸಪ್ತಮಿ
೧೯ ನೇ ಫೆಬ್ರವರಿ ೨೦೨೧